ಸಹಾಯ ವಾಣಿ

1800 425 7910(Toll free)

ತೋಟಗಾರಿಕೆಯು ಕೃಷಿಯ ಪ್ರಮುಖ ಭಾಗ. ದೇಶ ಹಾಗೂ ರಾಜ್ಯದಲ್ಲಿ ತೋಟಗಾರಿಕೆ ಕ್ಷೇತ್ರದ ಕೊಡುಗೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಜನರಲ್ಲಿ ಆರೋಗ್ಯ ಹಾಗೂ ಪೌಷ್ಠಿಕತೆಗೆ ಸಂಬಂಧಿಸಿದ ಅರಿವು ಹೆಚ್ಚುತ್ತಿರುವುದರಿಂದ ಸಹಜವಾಗಿ ತೋಟಗಾರಿಕೆ ಬೆಳೆಗಳ ಬೇಡಿಕೆಯೂ ಹೆಚ್ಚುತ್ತಿದೆ. ತೋಟಗಾರಿಕೆಯ ಪ್ರಾಮುಖ್ಯತೆಯನ್ನು ಅರಿತು ಅದರ ಸರ್ವೋತೋನ್ಮುಖ ಅಭಿವೃದ್ಧಿಗಾಗಿ ಕರ್ನಾಟಕ ಘನ ಸರ್ಕಾರವು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಬಾಗಲಕೋಟೆಯಲ್ಲಿ ದಿನಾಂಕ: ೨೨-೦೮-೨೦೦೮ ರಂದು ಸ್ಥಾಪಿಸಿತು. ಕರ್ನಾಟಕ ರಾಜ್ಯದ ಮಂಜೂರಾತಿ ಆದ್ಯಾದೇಶ ಸಂ. (ನಂ. ೨, ೨೦೦೮) ಮತ್ತು ಕರ್ನಾಟಕ ಸರ್ಕಾರದ ಅಧಿನಿಯಮ ಸಂ. ೧೧, ೨೦೧೦ ದಿನಾಂಕ: ೧೩-೦೫-೨೦೧೦ ರನ್ವಯ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಈ ವಿಶ್ವವಿದ್ಯಾಲಯವು ಕರ್ನಾಟಕದ ಏಕೈಕ ಹಾಗೂ ಭಾರತದ ಮೂರನೆಯ ತೋಟಗಾರಿಕೆಯ ವಿಶ್ವವಿದ್ಯಾಲಯವಾಗಿರುವುದು ವಿಶೇಷವಾಗಿದೆ. ದೇಶದಲ್ಲಿಯೇ ಕರ್ನಾಟಕ ರಾಜ್ಯವು ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆಯಲ್ಲಿ, ಅದರಲ್ಲಿಯೂ ತೋಟಪಟ್ಟಿ ಬೆಳೆಗಳಲ್ಲಿ ೧ನೇ ಸ್ಥಾನ, ಹೂವಿನ ಬೆಳೆಗಳಲ್ಲಿ ೨ನೇ ಸ್ಥಾನ, ಹಣ್ಣಿನ ಬೆಳೆಗಳಲ್ಲಿ ೬ನೇ ಸ್ಥಾನ, ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ೭ನೇ ಸ್ಥಾನ ಮತ್ತು ತರಕಾರಿ ಬೆಳೆಗಳಲ್ಲಿ ೮ನೇ ಸ್ಥಾನಗಳನ್ನು ಪಡೆದಿರುತ್ತವೆ

 

ಕಳೆದ ಒಂಬತ್ತು ವರ್ಷಗಳಿಂದ ವಿಶ್ವವಿದ್ಯಾಯಲದ ಬೆಳವಣಿಗೆ ಹಾಗೂ ಅಭಿವೃದ್ಧಿ ಗಣನೀಯವಾಗಿದೆ. ವಿಶ್ವವಿದ್ಯಾಲಯವು ಒಂಬತ್ತು ಮಹಾವಿದ್ಯಾಲಯಗಳು, ೧೧ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರಗಳು, ೧೦ ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆಗಳು, ೧೨ ಉತ್ಕೃಷ್ಠ ಸಂಶೋಧನಾ ಕೇಂದ್ರಗಳು, ೧೨ ವಿಸ್ತರಣಾ ಶಿಕ್ಷಣ ಘಟಕಗಳು ಮತ್ತು ಒಂದು ಕೃಷಿ ವಿಜ್ಞಾನ ಕೇಂದ್ರದ ಮೂಲಕ ರಾಜ್ಯದ ೨೩ ಜಿಲ್ಲೆಗಳಲ್ಲಿ ತನ್ನ ಸೇವೆಯನ್ನು ಒದಗಿಸುತ್ತಿದೆ. ವಿಶ್ವವಿದ್ಯಾಲಯವು ಸ್ನಾತಕ ಪದವಿಯನ್ನು (ತೋಟಗಾರಿಕೆ ಹಾಗೂ ಆಹಾರ ತಂತ್ರಜ್ಞಾನ), ೧೦ ವಿಷಯಗಳಲ್ಲಿ (ಹಣ್ಣು ವಿಜ್ಞಾನ, ತರಕಾರಿ ವಿಜ್ಞಾನ, ಪುಷ್ಪ ಕೃಷಿ ಮತ್ತು ಉದ್ಯಾನ ವಿನ್ಯಾಸ, ತೋಟಪಟ್ಟಿ, ಸಾಂಬಾರು, ಔಷಧೀಯ ಮತ್ತು ಸುಗಂಧ ಸಸ್ಯಗಳು, ಕೊಯ್ಲೋತ್ತರ ತಂತ್ರಜ್ಞಾನ, ಸಸ್ಯರೋಗ ಶಾಸ್ತ್ರ, ಕೀಟ ಶಾಸ್ತ್ರ ಹಾಗೂ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ ಅನುವಂಶೀಯತೆ ಮತ್ತು ಸಸ್ಯ ತಳಿ ವರ್ಧನೆ ಹಾಗೂ ಜೈವಿಕ ತಂತ್ರಜ್ಞಾನ) ಸ್ನಾತಕೋತ್ತರ (ತೋಟಗಾರಿಕೆ) ಪದವಿಯನ್ನು ನೀಡುತ್ತಿದೆ. ತೋಟಗಾರಿಕೆಯಲ್ಲಿ ಡಾಕ್ಟರೇಟ್ ಪದವಿಯನ್ನು ಒಂಬತ್ತು ವಿಷಯಗಳಲ್ಲಿ (ಹಣ್ಣು ವಿಜ್ಞಾನ, ತರಕಾರಿ ವಿಜ್ಞಾನ, ಪುಷ್ಪ ಕೃಷಿ ಮತ್ತು ಉದ್ಯಾನ ವಿನ್ಯಾಸ, ತೋಟಪಟ್ಟಿ, ಸಾಂಬಾರು, ಔಷಧೀಯ ಮತ್ತು ಸುಗಂಧ ಸಸ್ಯಗಳು, ಕೊಯ್ಲೋತ್ತರ ತಂತ್ರಜ್ಞಾನ, ಸಸ್ಯರೋಗ ಶಾಸ್ತ್ರ, ಕೀಟ ಶಾಸ್ತ್ರ, ಅನುವಂಶೀಯತೆ ಮತ್ತು ಸಸ್ಯ ತಳಿ ವರ್ಧನೆ ಹಾಗೂ ಜೈವಿಕ ತಂತ್ರಜ್ಞಾನ) ಪದವಿಯನ್ನು ಸಹ ನೀಡಲಾಗುತ್ತಿದೆ. ಇದಲ್ಲದೇ ತೋಟಗಾರಿಕೆಯಲ್ಲಿ ಎರಡು ವರ್ಷಗಳ ಡಿಪ್ಲೋಮಾ ಹಾಗೂ ದ್ರಾಕ್ಷಿ ಬೇಸಾಯ ಮತ್ತು ದ್ರಾಕ್ಷಾರಸ ಮತ್ತು ತೋಟಗಾರಿಕೆ ಬೆಳೆಗಳ ಕೊಯ್ಲೋತ್ತರ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿಗಳನ್ನು ನೀಡಲಾಗುತ್ತಿದೆ

© 2019 ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ . ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ